ದಾರಾಸಿಂಗ್
1928-. ಖ್ಯಾತ ಮಲ್ಲಯುದ್ಧ ಪಟು, ಚಿತ್ರನಟ. ಜಗತ್ತಿನ ಮಲ್ಲಯುದ್ಧ ವಿಶಾರದ ಸಾಲಿನಲ್ಲಿ ಅಪ್ರತಿಮ, ಕರೀಂಬಕ್ಷ್, ಗುಲಾರಿ, ಗಾಮ, ಇಮಾಂ ಬಕ್ಷ್ ಕೀಕರ ಸಿಂಗ್, ಪಿದ್ದು ಪೈಲ್ವಾನ್ ಮೊದಲಾದ ಭಾರತದ ಅತಿ ಸುಪ್ರಸಿದ್ಧ ಕುಸ್ತಿಮಲ್ಲರ ಸಾಲಿನಲ್ಲಿ ವಿಜೃಂಭಿಸುವವ. ಜಗತ್ ವಿಖ್ಯಾತ ಗಾಮನನ್ನು ಬಿಟ್ಟರೆ ಇಷ್ಟೇ ಕೀರ್ತಿ ಪಡೆದ ಕುಸ್ತಿಪಟು ಭಾರತದಲ್ಲಾಗಲಿ ಏಷ್ಯಾದಲ್ಲಾಗಲಿ ಇಲ್ಲ. ಗಾಮನದು ಭಾರತೀಯ ಪದ್ಧತಿಯ ಕುಸ್ತಿಯಾದರೆ ಈತನದು ಮುಕ್ತ ಶೈಲಿಯ (ಫ್ರೀಸ್ಟೈಲ್) ಕುಸ್ತಿ. ಅಮೆರಿಕನ್ ಮಾದರಿಯ ಫ್ರೀ ಸ್ಟೈಲ್ ರೆಸ್ಲಿಂಗ್‍ನಲ್ಲಿ ಈತನ್ನು ಸರಿದೂಗುವವರಿಲ್ಲ. ಆರಡಿ ಎರಡಿಂಚು ಎತ್ತರದ ಸದೃಢ ಕಾಯದ ಆಜಾನುಬಾಹು ದಾರಾಸಿಂಗನ ದೇಹದ ಅಳತೆ ಹೀಗೆ : ಎದೆ 47 ಇಂಚು, ಬೈಸೆಪ್ಸ್ 19 ಇಂಚು, ನಡು 30 ಇಂಚು. ಹುಟ್ಟಿದ್ದು ಪಂಜಾಬಿನ ಅಮೃತಸರ ಜಿಲ್ಲೆಯ ದರ್ಮುಚಾಕ್‍ನಲ್ಲಿ. ಬಾಲ್ಯದಿಂದಲೇ ಸಾಹಸಮಯ ಹೋರಾಟಗಳತ್ತ ಒಲವು. ಅದಕ್ಕೆ ಬೇಕಾದ ಕೆಚ್ಚು, ಸ್ಥೈರ್ಯ, ದಾಢ್ರ್ಯಗಳೂ ಇದ್ದವು. ಹದಿನೇಳನೆಯ ವಯಸ್ಸಿನಲ್ಲಿಯೇ ಈ ಸಿಖ್ ತರುಣ ಪಂಜಾಬಿನ ಅಜೇಯ ಕುಸ್ತಿಪಟುವಾಗಿದ್ದ. 1948ರ ವರೆಗೆ ನಡೆಸುತ್ತಿದ್ದ ಹವ್ಯಾಸಿ ಕುಸ್ತಿ ಸ್ಪರ್ಧೆಗಳಲ್ಲಿ ಒಂದೇ ಒಂದು ಸೋಲನ್ನೂ ಅನುಭವಿಸಲಿಲ್ಲ. ಆ ವರ್ಷವೇ ಅಮೆಚೂರ್ ಕುಸ್ತಿಗಾರಿಕೆಯನ್ನು ಬಿಟ್ಟು ಕುಸ್ತಿಯನ್ನೇ ತನ್ನ ವೃತ್ತಿಯಾಗಿಸಿಕೊಂಡ. ಇಂಡೋನೇಷ್ಯದಲ್ಲಿ ನಡೆದ ಹೆವಿವೇಟ್ ರೆಸ್ಲಿಂಗನ ಚಾಂಪಿಯನ್ ಷಿಪ್ಪಿನ ಸ್ಪರ್ಧೆಗೆ ಪ್ರವೇಶ ಮಾಡಿದ. ವಿದೇಶಿ ಕುಸ್ತಿಪಟುಗಳೊಡನೆ ಪ್ರಥಮ ಬಾರಿಗೆ ಹವಣಾದ ಈ ಪಂದ್ಯದಲ್ಲಿ ಎಲ್ಲರನ್ನೂ ಸೋಲಿಸಿ ಚಾಂಪಿಯನ್‍ಷಿಪ್ ಪಡೆದ. 1948ರಲ್ಲಿಯೇ ಸಿಂಗಪುರದಲ್ಲಿ ಇವನಿಗೆ ಭೇಟಿಯಾದ ಹರನಾಮ್ ಸಿಂಗ್ ವರಾನಿಯ ಇವನ ಶಕ್ತಿ ಸಾಮಥ್ರ್ಯಗಳನ್ನು ಗುರ್ತಿಸಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸಿ ಅದ್ವಿತೀಯ ತರಬೇತಿ ನೀಡಿದ. 1950ರಲ್ಲಿ ಮಲಯದಲ್ಲಿ ನಡೆದ ಪಂದ್ಯದಲ್ಲಿಯೂ ಸ್ಪರ್ಧಿಸಿದ. ಅಪ್ರತಿಮಮಲ್ಲ ಕಿಂಗ್‍ಕಾಂಗನ ಮಗನೊಂದಿಗೆ ಸೆಣಸಿ ಗೆದ್ದ. ಅಲ್ಲಿಂದ ಮುಂದೆ ವಿಜಯದ ಮೇಲೆ ವಿಜಯಗಳು ಒದಗಿದವು. ಈತನ ಪ್ರಸಿದ್ಧ ಇಂಡಿಯನ್ ಡೆಡ್ಲಾಕ್ ಹಿಡಿತಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿ ಪ್ರತಿಭಟಿಸುವ ಮಲ್ಲರು ಶರಣಾಗುತ್ತಿದ್ದರು. ಈತನ ಖ್ಯಾತಿ ದೇಶವಿದೇಶವ್ಯಾಪಿಯಾಯಿತು. 1953ರಲ್ಲಿ ಜಗತ್ತಿನ ಅತಿ ಪ್ರಬಲ ಕುಸ್ತಿವೀರರೆನಿಸಿದ್ದ ಕಿಂಗಕಾಂಗ್, ಸಿಲಿ ಸಮಾರ ಮತ್ತು ರೆಡ್‍ಸ್ಕಾರ್ಪಿನ್ ಭಾರತಕ್ಕೆ ಬಂದಿದ್ದರು. ಮಾನವಪರ್ವತವೆನಿಸಿಕೊಂಡಿದ್ದ ಕಿಂಗ್‍ಕಾಂಗ್‍ನೊಂದಿಗೆ ನಡೆದ ಕಾಳಗದಲ್ಲಿ ದಾರಾಸಿಂಗ್ ಎರಡು ಬಾರಿ ಸೋಲಬೇಕಾಯಿತು. ಅದರೂ ಧೃತಿಗೆಡದೆ ತನ್ನ ಶಕ್ತಿಯುಕ್ತಿಗಳನ್ನೆಲ್ಲ ಕ್ರೋಢಿಕರಿಸಿಕೊಂಡು ಮೂರನೆಯ ಬಾರಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಕಿಂಗ್‍ಕಾಂಗ್‍ನನ್ನು ತನ್ನ ಜೋಪ್ಸೆ ಹೊಡೆತಗಳಿಂದ ಹಣ್ಣು ಹಣ್ಣು ಮಾಡಿದ. ಮಹಾಮಲ್ಲನೂ ಸೋಲೊಪ್ಪಬೇಕಾಯಿತು. ಸಿಲಿಸಮಾರನೂ ಸೋಲೊಪ್ಪಿಕೊಂಡ. ಇನ್ನು ರೆಡ್‍ಸ್ಕಾರ್ಪಿನ್ ತಾನು ಸೋಲದೆ ತೊಟ್ಟ ಉಕ್ಕಿನ ಕವಚ ಕೀಳುವುದಿಲ್ಲವೆಂದು ಶಪಥ ತೊಟ್ಟಿದ್ದ ಇವನೂ ದಾರಾನ ಎದುರಿಗೆ ನಿಲ್ಲದೆ ಕವಚ ಕಿತ್ತು ಸೋಲೊಪ್ಪಿಕೊಂಡ. ದಾರಾಸಿಂಗ್ ಇನ್ನೂ ಅನೇಕ ವಿದೇಶೀಯರನ್ನು ಎದುರಿಸಿದ್ದಾನೆ. ಚೀನದ ಹಾರುವ ಮನುಷ್ಯ ವಾಂಗ್ ಬಕ್ಷಿ ಎರಡು ಬಾರಿ ಜಾಗತಿಕ ಚಾಂಪಿಯನ್ ಆಗಿದ್ದು ಮ್ಯೂರಿಕ್ ಟೆಲಿಟ್, ಫ್ಲಾಷ್ ಗಾರ್ಡನ್ ಮೊದಲಾದವರ ಮೇಲೆ ವಿಜಯ ಸಾಧಿಸಿದ. ಹೀಗೆ ದಾರಾಸಿಂಗ್ ಜಾಗತಿಕ ಹೆವಿವೇಟ್ ರೆಸ್ಲಿಂಗ್ ಚಾಂಪಿಯನ್ ಆದ. 1954ರಲ್ಲಿ ವಿಖ್ಯಾತ ಟೈಗರ್ ಜೋಗಿಂದರನನ್ನು ಏಳು ರೌಂಡುಗಳಲ್ಲಿ ಉರುಳಿಸಿ ಭಾರತದ ಚಾಂಪಿಯನ್ ಷಿಪ್ ಗೆದ್ದುಕೊಂಡ. ಅಲ್ಲಿಂದೀಚೇಗೆ ಹತ್ತಕ್ಕೆ ಹೆಚ್ಚು ಬಾರಿ ಆ ಚಾಂಪಿಯನ್ ಷಿಪ್‍ನ್ನು ಹೋರಾಡಿ ಉಳಿಸಿಕೊಂಡಿದ್ದಾನೆ. 50ರ ದಶಕದ ಕೊನೆಯಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಚೈತ್ರಯಾತ್ರೆ ಕೈಗೊಂಡು ಅಮೆರಿಕ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಹಲವಾರು ಕುಸ್ತಿಗಳನ್ನಾಡಿ ಒಂದರಲ್ಲಿಯೂ ಸೋಲದೆ ಬಂದ. 1957ರಲ್ಲಿ ಲಂಡನ್ನಿನಲ್ಲಿ ವಿಶ್ವ ಪ್ರಶಸ್ತಿಗೆ ಹೋರಾಡಿ ವಿಜಯ ಗಳಿಸಿದ. ಹನ್ನೊಂದು ವರ್ಷಗಳ ಅನಂತರ 1968ರಲ್ಲಿ ಮುಂಬಯಿಯಲ್ಲಿ ಪ್ರತಿಭಟಿಸಿದ ಪಟು ಲೋಥೆಸಿಯನ್ನು ಸೋಲಿಸಿ ಮತ್ತೆ ವಿಶ್ವ ಚಾಂಪಿಯನ್ ಆಗಿಯೇ ಉಳಿದ. 49 ವರ್ಷದ ದಾರಾಸಿಂಗ್ ಇಲ್ಲಿಯವರೆಗೆ 850ಕ್ಕೂ ಹೆಚ್ಚು ಕುಸ್ತಿಗಳನ್ನು ಆಡಿದ್ದಾನೆ. ಇಂದೂ ಸ್ಪರ್ಧೆಗಳಲ್ಲಿ ಭಾಗವಹಿಸುವುದುಂಟು. ರುಸ್ತುಂ-ಎ-ಜಮಾನ್ ಎಂಬುದು ಈತನ ಹಲವು ಬಿರುದುಗಳಲ್ಲಿ ಪ್ರಸಿದ್ಧವಾದುದು.

ದಾರಾಸಿಂಗ್ ಚಲನಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದಾನೆ. ಕಿಂಗ್‍ಕಾಂಗ್ ಈತನ ಮೊದಲ ಚಿತ್ರ. ಕುಸ್ತಿಯೇ ಪ್ರಧಾನವಾದ ಈ ಚಿತ್ರದಲ್ಲಿ ಈತನೊಂದಿಗೆ ಕಿಂಗ್‍ಕಾಂಗ್‍ನೂ ಅಭಿನಯಿಸಿದ್ದಾನೆ. ಅನಂತರ ಬಂದ ಚಿತ್ರಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡವು. ಆದರೆ ಇವನು ನಾಯಕವಾಗಿ ನಟಿಸಿರುವ ಚಿತ್ರಗಳೆಲ್ಲವೂ ಮೂರನೆಯ ದರ್ಜೆಯವು. ಕೆಲವು ಮೊದಲ ಮತ್ತು ಎರಡನೆಯ ದರ್ಜೆ ಚಿತ್ರಗಳಲ್ಲಿ ಮತ್ತು ಟೆಲಿವಿಷನ್ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಇವನ ತಮ್ಮ ರಾಂಧವನೂ ಹೆಸರಾಂತ ಕುಸ್ತಿಪಟು.			
	(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ